![]() |
| ಅರಕಲಗೂಡು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಮೆಕ್ಕೆಜೋಳ ಸಂಸ್ಕರಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದ ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ. ಮಧುಕೇಶ್ವರ್ ರೈತರ ಸಮಸ್ಯೆ ಆಲಿಸಿದರು. |
ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ತಲೆ ಎತ್ತಿರುವ ಮೆಕ್ಕೆಜೋಳ ಸಂಸ್ಕರಣಾ ಘಟಕದಿಂದ ಪರಿಸರಕ್ಕೆ ಹಾನಿಯಾಗಿ ಸುತ್ತಲಿನ ನಿವಾಸಿಗಳು ವಾಸಿಸಲಾಗುತ್ತಿಲ್ಲ. ಹಾಗಾಗಿ ಈ ಘಟಕವನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಲ್ಲೂರು ನಿವಾಸಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಡಾ. ಮಧುಕೇಶ್ವರ್ ಅವರನ್ನು ಮೆಕ್ಕೆಜೋಳ ಮಾರಾಟಕ್ಕೆ ತಂದಿದ್ದ ರೈತರು ಸುತ್ತುವರೆದು ಯಾವುದೇ ಕಾರಣಕ್ಕೂ ಘಟಕವನ್ನು ಮುಚ್ಚಿಸಬಾರದು ಎಂದು ಆಗ್ರಹಿಸಿದರು.
ಈ ಭಾಗದಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ ತೆರೆದ ನಂತರ ಬೆಳೆಗಾರರಿಗೆ ಅಪಾರ ಅನುಕೂಲವಾಗುತ್ತಿದೆ. ಹಸಿ ಜೋಳ ಮತ್ತು ಒಣಗಿದ ಜೋಳವನ್ನು ಪ್ರತ್ಯೇಕವಾಗಿ ಖರೀದಿಸಿ ಉತ್ತಮ ಬೆಲೆ ನೀಡಲಾಗುತ್ತಿದೆ. ಇಲ್ಲಿ ತಮಗೆ ಯಾವುದೇ ತೊಂದರೆಯಾಗದೇ ಉತ್ಪನ್ನಕ್ಕೆ ತಕ್ಕಂತೆ ಒಳ್ಳೆಯ ದರ ನೀಡಲಾಗುತ್ತಿದೆ. ಬೆಲೆಯಲ್ಲಿಯೂ ರೈತರಿಗೆ ಅನ್ಯಾಯವಾಗುತ್ತಿಲ್ಲ. ಕೆಲವರ ಕುಮ್ಮಕ್ಕಿನಿಂದಾಗಿ ಘಟಕವನ್ನು ಸ್ಥಗಿತಗೊಳಿಸುವ ಹುನ್ನಾರ ನಡೆದಿದೆ ಎಂದು ರೈತರು ದೂರಿದರು.
ಮಳೆಯಿಲ್ಲದೇ ಈ ಬಾರಿ ಮೊದಲೇ ಬರಗಾಲದ ಬವಣೆಗೆ ಸಿಲುಕಿ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದೇವೆ. ಈಗ ಏಕಾಏಕಿ ಘಟಕವನ್ನು ಮುಚ್ಚಿಸಿದರೆ ಇನ್ನಷ್ಟು ನಷ್ಟವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ರೈತರ ಹಿತ ದೃಷ್ಟಿಯಿಂದ ಘಟಕವನ್ನು ಮುಚ್ಚಿಸಬೇಡಿ ಎಂದು ರೈತರು ಡಾ. ಮಧುಕೇಶ್ವರ್ ಅವರಲ್ಲಿ ಮನವಿ ಮಾಡಿದರು.
ಕೆಲ್ಲೂರು ಗ್ರಾಮಸ್ಥರು ಮನವಿ ಮೇರೆಗೆ ಘಟಕಕ್ಕೆ ಭೇಟಿ ನೀಡಲಾಗಿದ್ದು, ಮೆಕ್ಕೆಜೋಳ ಸಂಸ್ಕರಣಾ ಘಟಕದಿಂದ ಆಗುತ್ತಿರುವ ಸಾಧಕ- ಬಾಧಕ ಕುರಿತು ಸೂಕ್ತ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಿಸಿದವರ ಗಮನಕ್ಕೆ ತರಲಾಗುವುದು ಎಂದು ಡಾ. ಮಧುಕೇಶ್ವರ್ ತಿಳಿಸಿದರು.
ತಹಶೀಲ್ದಾರ್ ಆರ್. ಮೋಹನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬು, ಕಂದಾಯ ನಿರೀಕ್ಷಕ ಬಸವರಾಜು ಉಪಸ್ಥಿತರಿದ್ದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಕೆಲ್ಲೂರು ಶಶಿಕುಮಾರ್, ಮೆಕ್ಕೆಜೋಳ ಸಂಸ್ಕರಣಾ ಘಟಕ ದಿನದ 24 ಗಂಟೆಗಳ ಕಾಲ ಚಾಲನೆಯಲ್ಲಿರುತ್ತದೆ. ಇದರಿಂದ ಗ್ರಾಮದಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳು ಓದಲು ತೊಂದರೆಯಾಗಿದೆ. ಅತಿಯಾದ ಶಬ್ಧ ಮಾಲೀನ್ಯದಿಂದ ವೃದ್ಧರು ಮತ್ತು ಕಾಯಿಲೆ ಬಿದ್ದಿರುವ ಜನರ ನೆಮ್ಮದಿಗೆ ಭಂಗವುಂಟಾಗಿದೆ. ಹಾಗಾಗಿ ಪರಿಸರಕ್ಕೆ ಮಾರಕವಾಗಿರುವ ಮೆಕ್ಕೆಜೋಳ ಸಂಸ್ಕರಣಾ ಘಟಕವನ್ನು ಮುಚ್ಚಿಸಲು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು.

No comments:
Post a Comment