ತಂಬಾಕು ಮಾರುಕಟ್ಟೆ

ರಾಮನಾಥಪುರ: ಇಲ್ಲಿಯ ತಂಬಾಕು ಮಾರುಕಟ್ಟೆಯಲ್ಲಿ ಬುಧವಾರ ಶುರುವಾದ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆಯ ಮೊದಲ ದಿನ ಗುಣಮಟ್ಟದ 1 ಕೆ.ಜಿ. ಹೊಗೆಸೊಪ್ಪು 60 ರೂಗೆ ಮಾರಾಟವಾಯಿತು.
ಶಾಸಕ ಎ. ಮಂಜು ಮತ್ತು ಮಾರುಕಟ್ಟೆ ಅಧಿಕಾರಿಗಳು ಬೇಲ್‍ಗಳಿಗೆ ಸಾಂಪ್ರದಾಯಿಕವಾಗಿ ಸಲ್ಲಿಸಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು. ಮೊದಲಿಗೆ ಪ್ಲಾಟ್‍ಫಾರಂ 63ರಲ್ಲಿ ಶುರುವಾದ ಇ ಹರಾಜಿನಲ್ಲಿ ಮೊದಲ ಬೇಲ್‍ಗೆ 1ಕೆಜಿಗೆ 156 ರೂಪಾಗೆ ಬಿಡ್ ಕೂಗಲಾಯಿತು. ನಂತರ ಮಾರುಕಟ್ಟೆಗೆ ಬಂದಿದ್ದ 18 ಬೇಲ್‍ಗಳಲ್ಲಿ ಕೆಲವಕ್ಕೆ 154 ರೂ ವರೆಗೆ ಬೇಲೆ ಏರುಪೇರಾಯಿತು. ಗರಿಷ್ಠ 158 ರೂ ಹಾಗೂ ಕನಿಷ್ಠ 148 ರೂ ಬಿಡ್ ಆದ ಬೇಲ್‍ಗಳಲ್ಲಿ ಈ ದಿನದ ಮಟ್ಟಿಗೆ ರೈತರಿಗೆ ಸರಾಸರಿ 154 ರೂಪಾಯಿ 55ಪೈಸೆ ಸಿಕ್ಕಿತು.


160 ರೂಗೆ ನೆಗೆತ: ತದನಂತ ಶಾಸಕ ಎ. ಮಂಜು ಅವರು ಪ್ಲಾಟ್‍ಫಾರಂ 7ರಲ್ಲಿ ಹರಾಜು ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದರು. 156 ರೂನಿಂದ 152 ರೂ ವರೆಗೆ ಬೆಲೆಯಲ್ಲಿ ಏರಿಳಿತವುಂಟಾಗುತ್ತಿದ್ದ ಪರಿಣಾಮ ಸಿಟ್ಟಿಗೆದ್ದ ಶಾಸಕರು ಹರಾಜು ಅಧೀಕ್ಷಕ ಕಾಶಿರಾಮ ನಾಯಕ್ ಅವರೊಂದಿಗೆ ಗುಣಮಟ್ಟದ ಹೊಗೆಸೊಪ್ಪು ಬೇಲ್ ತೋರಿಸಿ ಇದರ ದರ ಒಂದು ಕೆಜಿಗೆ 154 ರೂ ಅಷ್ಟೆಯೇ ಎಂದು ಕಿಡಿಕಾರಿದರು. ಶಾಸಕರು ಕೆಂಡಮಂಡಲವಾದ ತಕ್ಷಣವೇ ಸಪ್ಪೆ ಮೋರೆ ಹಾಕಿ ತಬ್ಬಿಬ್ಬಾದ ಹರಾಜು ಅಧೀಕ್ಷಕರು ಒಮ್ಮೆಲೇ ಇ ಹರಾಜಿನಲ್ಲಿ ಬೆಲೆ ಏರಿಕೆ ಮಾಡಿದರು. ಆಗ ಉತ್ತಮ ದರ್ಜೆಯ 1 ಕೆಜಿ ಹೊಗೆಸಪ್ಪಿನ ದರ 160 ರೂಪಾಯಿಗೆ ನೆಗೆತ ಕಂಡಿತು. ಇದರಿಂದ ಹರ್ಷಗೊಂಡ ಬೆಳೆಗಾರರು ಚಪ್ಪಾಳೆ ತಟ್ಟಿ ಶಾಸಕರಿಗೆ ಕರತಾನಡ ವ್ಯಕ್ತಪಡಿಸಿದರು.
ಹಳೆಯ 7ರ ಪ್ಲಾಟ್‍ಫಾರಂ ಮಾರುಕಟ್ಟೆಗೆ ಆವಕವಾಗಿದ್ದ 18 ಬೇಲ್‍ಗಳಲ್ಲಿ 1 ಕೆಜಿಗೆ ಗರಿಷ್ಠ 160 ರೂ, ಕನಿಷ್ಠ 152 ರೂಗೆ ಬಿಡ್ ಮಾಡಲಾಯಿತು. ರೈತರಿಗೆ ಸರಾಸರಿ ದರ 154 ರೂ 58 ಪೈಸೆ ಲಭಿಸಿತು. ಇದರಿಂದ ಪ್ರಾರಂಭದ ದಿನದಲ್ಲಿ ಎರಡು ಮಾರುಕಟ್ಟೆಗಳಲ್ಲಿ ನಡೆದ ಹರಾಜಿನಲ್ಲಿ ಸರಾಸರಿ ದರ ಹೋಲಿಕೆ ಮಾಡಿದರೆ 3 ಪೈಸೆ ವ್ಯತ್ಯಾಸ ಉಂಟಾಯಿತು. 4 ಕಂಪನಿಗಳ ವರ್ತಕರು ಬಿಡ್‍ನಲ್ಲಿ ಪಾಲ್ಗೊಂಡಿದ್ದರು.
ಹೊಸ ಮಾರುಕಟ್ಟೆ ಹರಾಜು ಅಧೀಕ್ಷಕ ಪುರುಷೋತ್ತಮ ರಾಜೇ ಅರಸ್ ಮಾತನಾಡಿ, ಪ್ರತಿದಿನ ಬೆಳಗ್ಗೆ 5.30ರಿಂದ ಮಾರುಕಟ್ಟೆಗೆ ಅವಕವಾದ ತಂಬಾಕು ಬೇಲ್‍ಗಳ ತೂಕ ಆರಂಭಿಸಿ 9 ಗಂಟೆ ನಂತರ ಹರಾಜು ಪ್ರಕ್ರಿಯೆ ಶುರು ಮಾಡಲಾಗುತ್ತದೆ. ಈವಾಗ ಮಾರುಕಟ್ಟೆಯ ಪ್ರಾರಂಭದಲ್ಲಿ ಯಾರು ಬೇಕಾದರೂ ಮಾರುಕಟ್ಟೆಗೆ (ಓಪ್ಪನ್ ಕ್ಲಸ್ಟರ್) ತಂಬಾಕು ಬೇಲ್‍ಗಳನ್ನು ತಂದು ಮಾರಾಟ ಮಾಡಬಹುದು. ಮಾರುಕಟ್ಟೆಯಲ್ಲಿ ತಂಬಾಕು ಬೇಲ್‍ಗಳು ಏರಿಕೆಯಾದರೆ ಮುಂದಿನ ದಿನಗಳಲ್ಲಿ  ಕ್ಲಸ್ಟರ್ ವ್ಯವಸ್ಥೆ ಮಾಡಲಾಗುವುದು ಎಂದರು.                                                                                                         
ರೈತರು ತರುವ ತಂಬಾಕು ಬೇಲ್‍ಗಳಲ್ಲಿ  ಕನಿಷ್ಠ 100ರಿಂದ 150 ಕೆ.ಜಿ. ತನಕ ಭಾರದ 1 ಬೇಲ್ ಪ್ರಕಾರ ಬೇಲ್ ಸಿದ್ದಪಡಿಸಿ ತರಬೇಕು. ಈಗ ಮಧ್ಯಮ, ಉತ್ತಮ ದರ್ಜೆಯ ಸೊಪ್ಪು ವಿಂಗಡಿಸಿಕೊಂಡು ಹರಾಜಿಗೆ ತಂದರೆ ತಮಗೆ ಬೇಕಾದ ಹೊಗೆಸೊಪ್ಪನ್ನು  ಹರಾಜಿನಲ್ಲಿ ಸ್ಯಾಂಪಲ್ ಸೊಪ್ಪು ಮಾತ್ರ ಖರೀದಿಸಿ ನಂತರ ತಮಗೆ ಬೇಕಾದ ದರ್ಜೆಯ ತಂಬಾಕನ್ನು ಕೊಳುತ್ತಾರೆ. ಆಂಧ್ರಪ್ರದೇಶದಲ್ಲಿ ಇನ್ನೂ ಮಾರುಕಟ್ಟೆ ಹರಾಜು ಮುಕ್ತಾಯವಾಗಿಲ್ಲ. ಹಾಗಾಗಿ ಇಲ್ಲಿ ಪ್ರಾರಂಭದಲ್ಲಿ ಎರಡು ಹರಾಜು ಮಾರುಕಟ್ಟೆಗಳಿಂದ ಸುಮಾರು 8 ರಿಂದ 10 ಕಂಪನಿಗಳ ವರ್ತಕರು ಪಾಲ್ಗೊಳ್ಳಲಿದ್ದಾರೆ ಎಂದು ಹರಾಜು ಅಧೀಕ್ಷPರು ತಿಳಿಸಿದರು.
ಮಾರುಕಟ್ಟೆಗೆ ಭೇಟಿಗೆ ಆಗ್ರಹ: ಹರಾಜು ಪ್ರಕ್ರಿಯೆ ಮುಗಿದ ನಂತರ ಶಾಸಕ ಎ. ಮಂಜು ಅವರು ಹರಾಜು ಅಧೀಕ್ಷಕರ ಕಚೇರಿಗೆ ತೆರಳಿ ಅಧಿಕಾರಿಗಳು ಮತ್ತು ವರ್ತಕರ ಸಮ್ಮುಖದಲ್ಲಿ ಸಭೆ ನಡೆಸಿ ರೈತರ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ಮುಕ್ಕನಹಳ್ಳಿ ಬೆಳೆಗಾರ ಶಫಿ, ನಿಸಾರ್ ಅಹಮದ್ ಮತ್ತಿತರರು ಇನ್ನು ಮೂರ್ನಾಲ್ಕು ಬಾರಿಯಾದರೂ ನೀವು ಮಾರುಕಟ್ಟಗೆ ಭೇಟಿ ನೀಡಿ ಉತ್ತಮ ಬೆಲೆ ಕೊಡಿಸಬೇಕು ಎಂದು ಶಾಸಕರನ್ನು ಒತ್ತಾಯಿಸಿದ ಪ್ರಸಂಗ ನಡೆಯಿತು. ಆಗ ರೈತರು ಹೊಗೆಸೊಪ್ಪನ್ನು ಉತ್ತಮ ರೀತಿಯಲ್ಲಿ ವಿಂಗಡಿಸಿ ಬೇಲ್‍ಗಳನ್ನು ಸಿದ್ದಪಡಿಸಿಕೊಂಡು ತರಬೇಕು ಎಂದು ಶಾಸಕರು ಹೇಳಿದರು.
ಈ ಬಾರಿ ಮಳೆ ಕೊರತೆ ಕಾರಣ ಸುಮಾರು 20 ಮಿಲಿಯನ್ ಕೆಜಿ ಹೊಗೆಸೊಪ್ಪು ಉತ್ಪಾದನೆ ಕುಂಠಿತಗೊಂಡಿದೆ. ಬೆಳೆದಿರುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಬೆಲೆ ನೀಡಬೇಕು ಎಂದು ಶಾಸಕರು ಹರಾಜು ಅಧೀಕ್ಷಕರಿಗೆ ತಾಕೀತು ಮಾಡಿದರು.

No comments:

Post a Comment